ಸೂರಿ ವೆಂಕಟರಮಣ ಶಾಸ್ತ್ರಿಗಳು ೧೮೫೫ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನಲ್ಲಿರುವ ಕರ್ಕಿ ಎನ್ನುವ ಗ್ರಾಮದಲ್ಲಿ ಜನಿಸಿದರು. ಇವರ ತಂದೆ ವಿಘ್ನೇಶ್ವರ ಶಾಸ್ತ್ರಿಗಳು. == ಶಿಕ್ಷಣ == ಸೂರಿಯವರು ಕರ್ಕಿಯಲ್ಲಿಯೆ ತಮ್ಮ ಪ್ರಾಥಮಿಕ ಶಿಕ್ಷಣ ಪೂರೈಸಿದರು. ತಂದೆಯಿಂದ ಸಂಸ್ಕೃತ ಭಾಷೆ ಹಾಗು ವೈದಿಕ ವಿದ್ಯೆ ಕಲಿತ ನಂತರ , ತಮ್ಮ ಗುರುಪೀಠವಾದ ಸಾಗರ ತಾಲೂಕಿನ ರಾಮಚಂದ್ರಾಪುರ ಮಠದಲ್ಲಿ ಕಾವ್ಯ, ವ್ಯಾಕರಣ, ಅಲಂಕಾರ ಹಾಗೂ ವೇದಾಂತಗಳನ್ನು ಅಭ್ಯಸಿಸಿದರು. == ನೌಕರಿ == ಶಿಕ್ಷಣದ ನಂತರ ರಾಮಚಂದ್ರಾಪುರ ಮಠದಲ್ಲಿಯೆ ಪಾರುಪತ್ಯಗಾರರಾಗಿ ಸೂರಿಯವರು ಕೆಲಸ ಮಾಡಿದರು. ಆಬಳಿಕ ಇಂಗ್ಲಿಷ್ ಅಭ್ಯಾಸ ಮಾಡಿ, ಮೈಸೂರು ಸಂಸ್ಥಾನದಲ್ಲಿ ಫೌಜದಾರರಾಗಿ ಕೆಲಸ ಮಾಡಿದರು ಎಂದು ಹೇಳಲಾಗುತ್ತಿದೆ. == ಪತ್ರಿಕೋದ್ಯಮ == ಈ ನೌಕರಿಗಳಲ್ಲಿ ಆತ್ಮತೃಪ್ತಿಯಿಲ್ಲದ ಸೂರಿ ವೆಂಕಟರಮಣ ಶಾಸ್ತ್ರಿಗಳು ಮುಂಬಯಿಗೆ ತೆರಳಿ ‘ಕರ್ಕಿ ವೆಂಕಟರಮಣ ಶಾಸ್ತ್ರಿ ಎಂಡ್ ಕಂಪನಿ’ ಎನ್ನುವ ಸಂಸ್ಥೆಯನ್ನು ಸ್ಥಾಪಿಸಿ ೧೮೮೫ರಲ್ಲಿ “ ಹವ್ಯಕ ಸುಬೋಧ” ಎನ್ನುವ ರಾಷ್ಟ್ರೀಯ ಧೋರಣೆಯ ವಾರಪತ್ರಿಕೆ ಪ್ರಾರಂಭಿಸಿದರು. ೧೮೮೮ರಲ್ಲಿ ಕನ್ನಡ ಹುಡುಗರಿಗಾಗಿ “ ಹಿತೋಪದೇಶ” ಎನ್ನುವ ಮಾಸಪತ್ರಿಕೆಯನ್ನು ಆರಂಬಿಸಿದರು. ಈ ಪತ್ರಿಕೆಯಲ್ಲಿ ಶಾಸ್ತ್ರಿಗಳು ವ್ಯಂಗ್ಯ ಚಿತ್ರಗಳನ್ನು ಉಪಯೋಗಿಸಿದ್ದು,ಇದು ಕನ್ನಡದಲ್ಲಿ ಬಹುಶಃ ವ್ಯಂಗ್ಯಚಿತ್ರಗಳ ಬಳಕೆ ಮಾಡಿದ ಮೊದಲ ಪತ್ರಿಕೆ ಎಂದು ಶ್ರೀನಿವಾಸ ಹಾವನೂರ ಅಭಿಪ್ರಾಯ ಪಡುತ್ತಾರೆ. ಮುಂದುವರಿದು, “..ಭಾರತೀಯರ ಸಮಸ್ಯೆಗಳು,ಬ್ರಿಟಿಷರ ಕುಟಿಲ ನೀತಿ ಹಾಗು ದಬ್ಬಾಳಿಕೆ, ಕೆನರಾ ಜಿಲ್ಲೆಯ ಸಂಕಷ್ಟಗಳು, ವಿಶೇಷತ: ಅಧಿಕಾರಿಗಳ ದುರ್ವರ್ತನೆ ಇವನ್ನು ನಿರೂಪಿಸುವಲ್ಲಿ ಅವನು ತನ್ನ ಲೇಖನಿಯನ್ನು ಖಡ್ಗಕ್ಕಿಂತಲೂ ಹರಿತವಾಗಿ ಮಸೆದನು…..ರಾಜಕೀಯ ಕಾರಣಕ್ಕಾಗಿ ಶಿಕ್ಷೆಗೊಳಗಾದ ಕನ್ನಡ ಲೇಖಕರಲ್ಲಿ ವೆಂಕಟರಮಣ ಶಾಸ್ತ್ರಿಯೇ ಮೊದಲಿಗನು…” ಎಂದು ಶ್ರೀನಿವಾಸ ಹಾವನೂರ ಹೇಳಿದ್ದಾರೆ. == ಸಾಹಿತ್ಯ == ಪತ್ರಕರ್ತರಲ್ಲದೆ, ಸೂರಿ ವೆಂಕಟರಮಣ ಶಾಸ್ತ್ರಿಗಳು ಗ್ರಂಥಕರ್ತರಾಗಿಯೂ ಮಹತ್ವ ಪಡೆದಿದ್ದಾರೆ. ಅವರು ಬರೆದ ನಾಟಕ “ಇಗ್ಗಪ್ಪ ಹೆಗ್ಗಡೆಯ ವಿವಾಹ ಪ್ರಹಸನ” ೧೮೮೭ರಲ್ಲಿ ಪ್ರಕಟವಾಯಿತು. ಇದು ಬಹುಶಃ ಹೊಸಗನ್ನಡದ ಮೊದಲ ಸಾಮಾಜಿಕ ನಾಟಕವೆನ್ನಲಾಗಿದೆ. === ನಾಟಕ === ಇಗ್ಗಪ್ಪ ಹೆಗ್ಗಡೆಯ ವಿವಾಹ ಪ್ರಹಸನ (೧೮೮೭) === ಪ್ರವಾಸ ಸಾಹಿತ್ಯ === ದಕ್ಷಿಣ ಯಾತ್ರಾ ಚರಿತ್ರೆ (೧೮೮೫) === ಸಂಶೋಧನೆ === ಹವೀಕ ದ್ರವಿಡ ಬ್ರಾಹ್ಮಣರ ಉತ್ಪತ್ತಿಯ ಇತಿಹಾಸವು (೧೮೮೮) ಅನಾರ್ಯರ ವಿವರ (೧೮೮೯) === ಗ್ರಂಥ ಪರಿಷ್ಕರಣ === ಕೃಷ್ಣ ಸಂಧಾನ ಮತ್ತು ಭೀಷ್ಮ ಪರ್ವ (೧೮೮೬) ರತಿ ಕಲ್ಯಾಣ ಕೌಂಡಲಕ ವಧೆಯು (೧೮೮೬) ಘಟೋದ್ಗಜನ ಕಾಳಗವು ( ೧೮೮೯) ಬಿಲ್ಲ ಹಬ್ಬ ಅಥವಾ ಕಂಸ ವಧೆಯು === ಸಂಪಾದನೆ === ಮಹಾಕವಿ ಪರಮದೇವಾಂಕ ವಿರಚಿತ “ತುರಂಗ ಭಾರತ” ಸೂರಿ ವೆಂಕಟರಮಣ ಶಾಸ್ತ್ರಿಗಳು ೧೯೨೫ರಲ್ಲಿ ನಿಧನರಾದರು.